ತ್ವಚೆಯ ಸಮಸ್ಯೆಯೇ..?

  • by

ನೈಸರ್ಗಿಕವಾಗಿ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?
ನಮ್ಮಲ್ಲಿ ಹೆಚ್ಚಿನವರಿಗೆ ಮುಖ ತ್ವಚೆ ಸಾಮಾನ್ಯದಿಂದ ಎಣ್ಣೆಚರ್ಮದಂತೆ ಅನ್ನಿಸಿದರೂ ದೇಹದ ಇತರ ಭಾಗದ ತ್ವಚೆ ತೀರಾ ಒಣಗಿರುವಂತೆ ಅನಿಸುತ್ತದೆ. ಒಂದು ವೇಳೆ ವಾತಾವರಣದ ಆರ್ದ್ರತೆಯನ್ನು ತ್ವಚೆ ಹೀರಿಕೊಳ್ಳಲು ವಿಫಲವಾದರೆ ಆಗ ತ್ವಚೆಒಣಗುತ್ತದೆ. ಹಲವು ವ್ಯಕ್ತಿಗಳಿಗೆ ಇದು ಇಡಿಯ ವರ್ಷ ಕಾಡಬಹುದು.


ಒಂದು ವೇಳೆ ನಿಮ್ಮದು ಒಣತ್ವಚೆಯೇ ಆಗಿದ್ದರೆ ಚಳಿಗಾಲದಲ್ಲಿ ನೀವು ಹಲವು ತೊಂದರೆಗಳನ್ನು ಎದುರಿಸಬೇಕಾಗಿ ಬರಬಹುದು.ಒಣ ತ್ವಚೆ ಅತಿ ಹೆಚ್ಚು ಸೆಳೆಯುವ ಕಾರಣದಿಂದಾಗಿ ಸುಲಭವಾಗಿ ಬಿರುಕು ಬಿಡುತ್ತದೆ ಹಾಗೂ ಕೆಲವೆಡೆ, ವಿಶೇಷವಾಗಿ ತುಟಿಗಳಲ್ಲಿ ಚರ್ಮ ಹರಿದು ರಕ್ತಒಸರತೊಡಗುತ್ತದೆ. ವಾತಾವರಣದಲ್ಲಿ ಆರ್ದ್ರತೆ ಕಡಿಮೆ ಇದ್ದಾಗ ಇದನ್ನು ಹೀರಿಕೊಳ್ಳಲೂ ಆಗದೇ ಒಣತ್ವಚೆ ಇನ್ನಷ್ಟು ಶೀಘ್ರವಾಗಿ ಒಣಗುತ್ತದೆ.

ತ್ವಚೆ ಒಣಗಿದರೆ ಏನು ಮಾಡಬೇಕು..?

ಇದೇ ಕಾರಣಕ್ಕೆ ಚರ್ಮದಲ್ಲಿ ಬೆವರುವುದು ಹಾಗೂ ಗಾಳಿಯಲ್ಲಿ ಆರ್ದ್ರತೆ ಇರುವುದು ಎಷ್ಟು ಅಗತ್ಯ ಎಂದು ತಿಳಿಯುತ್ತದೆ. ಕೆಲವೊಮ್ಮೆ ಒಣತ್ವಚೆಯವರ ಸಹಿತ ಎಲ್ಲಾ ಬಗೆಯ ತ್ವಚೆಯವರಿಗೂ ಕೊಂಚ ಹೆಚ್ಚೇ ತ್ವಚೆಯ ಆರೈಕೆ ಬೇಕಾಗುತ್ತದೆ. ಆದರೆ ಚಿಂತೆಯ ಅಗತ್ಯವಿಲ್ಲ, ಒಣತ್ವಚೆಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ
ಕೆಲವು ಅಮೂಲ್ಯವಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಒದಗಿಸಲಾಗಿದ್ದು ಇದು ಒಣಗಿದ ತ್ವಚೆಯನ್ನು ಶೀಘ್ರವೇ
ಸಾಮಾನ್ಯ ಸ್ಥಿತಿಗೆ ಮರಳಿಸಲು ನೆರವಾಗಲಿವೆ. ಒಂದು ವೇಳೆ ಒಣಚರ್ಮ ಬಿರಿಬಿಡುತ್ತಿದೆ ಎನ್ನುವಾಗಲೇ ಈ ವಿಧಾನಗಳನ್ನು
ಅನುಸರಿಸುವ ಮೂಲಕ ಮುಂದೆ ಎದುರಾಗುವ ತೊಂದರೆಗಳಿಂದ ರಕ್ಷಣೆ ಪಡೆಯಬಹುದು….ತ್ವಚೆಯ ಕಾಂತಿಯನ್ನು
ನೈಸರ್ಗಿಕವಾಗಿ ಪಡೆಯಲು ಇಂದಿನ ಲೇಖನದಲ್ಲಿ ನಾವು ಕೆಲವೊಂದು ಟಿಪ್ಸ್ ನೀಡಿದ್ದು ಖಂಡಿತ ನಿಮಗೆ ಇದು
ಸಹಕಾರಿಯಾಗಲಿದೆ. ಒಣ ತ್ವಚೆಯುಂಟಾಗುವುದು ತ್ವಚೆಗೆ ಬೇಕಾಗಿರುವ ಕಾಳಜಿಯನ್ನು ನೀಡದೇ ಇರುವುದರಿಂದ ಇದರಿಂದ ತ್ವಚೆ
ಕಂಗೆಡುತ್ತದೆ.

ಸ್ನಾನದ ಅವಧಿ ಕನಿಷ್ಟವಾಗಿರಲಿ. ಅತಿ ದೀರ್ಘವೆಂದರೆ ಹದಿನೈದರಿಂದ ಇಪ್ಪತ್ತು ನಿಮಿಷಗಳ ಒಳಗೆ ನಿಮ್ಮ ಸ್ನಾನ
ಪೂರ್ಣಗೊಳ್ಳುವಂತೆ ನೋಡಿಕೊಳ್ಳಿ. ಇದಕ್ಕೂ ಹೆಚ್ಚಿನ ಹೊತ್ತಿನ ಸ್ನಾನದಿಂದ ತ್ವಚೆಯ ಅಗತ್ಯ ತೈಲಗಳು ಹೊರಹೋಗುವ
ಮೂಲಕ ಒಣಚರ್ಮವನ್ನು ಇನ್ನಷ್ಟು ಒಣದಾಗಿಸಬಹುದು. ಉಗುರುಬೆಚ್ಚನೆಯ ನೀರನ್ನು ಬಳಸಿ ಬಿಸಿನೀರಿನ ಸ್ನಾನ ನಿಮಗೆ
ಅಪ್ಯಾಯಮಾನವೆಂದು ಅನ್ನಿಸಬಹುದು. ಆದರೆ ಇದರೊಂದಿಗೇ ಕೆಲವಾರು ಅನೈಚ್ಛಿಕ ತೊಂದರೆಗಳೂ ಎದುರಾಗುತ್ತವೆ. ಚರ್ಮದ
ಹೊರಪದರ ಪಕಳೆ ಏಳುವುದು, ತಲೆಹೊಟ್ಟು ಹಾಗೂ ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ಶೀಘ್ರವಾಗಿಸಬಹುದು.
ಆದ್ದರಿಂದ ಸ್ನಾನಕ್ಕೆ ಉಗುರುಬೆಚ್ಚನೆಯ ನೀರನ್ನು ಬಳಸುವುದು ಉತ್ತಮ. ಸಾಧ್ಯವಾದರೆ ತಣ್ಣೀರನ್ನು ಬಳಸಬೇಕು.
ಒಣತ್ವಚೆಯವರಿಗೆ ತಣ್ಣೀರು ಅತ್ಯುತ್ತಮವಾಗಿದೆ. ಇದರಿಂದ ತ್ವಚೆಯ ಸೂಕ್ಷ್ಮರಂಧ್ರಗಳು ಅತಿ ಕಡಿಮೆ ತೆರೆಯುತ್ತವೆ ಹಾಗೂ
ತೈಲನಷ್ಟ ಕನಿಷ್ಟವಾಗಿರುತ್ತದೆ.

ಸ್ನಾನದ ಬಳಿಕ ಏನು ಮಾಡಬೇಕು..?

 ಸ್ನಾನದ ಬಳಿಕ ದಪ್ಪ ಟವೆಲ್ಲೊಂದನ್ನು ಬಳಸಿ ಒತ್ತಿಕೊಂಡು ನೀರನ್ನು ಹೀರಿಕೊಳ್ಳುವಂತೆ ಮಾಡಿ ಹಾಗೂ ಟವೆಲ್ಲಿನಿಂದ
ಒರೆಸಿಕೊಳ್ಳಬೇಡಿ. ಉಜ್ಜಿದಷ್ಟೂ ಒಣಚರ್ಮ ಹೆಚ್ಚು ಪಕಳೆ ಏಳುತ್ತದೆ. ಆದ್ದರಿಂದ ಸೌಮ್ಯವಾಗಿ ಟವೆಲ್ಲಿನಿಂದ ಒತ್ತಿಕೊಳ್ಳಿ.
ಮಾರುಕಟ್ಟೆಯಲ್ಲಿ ಸಿಗುವ ಹಲವು ಪ್ರಸಾದನಗಳಲ್ಲಿ ಲೋಳೆಸರವಿದೆ. ಆದರೆ ಲೋಳೆಸರ ನೈಸರ್ಗಿಕವಾದಷ್ಟೂ ಉತ್ತಮ.
ಒಣತ್ವಚೆಗೆ ಲೋಳೆಸರವನ್ನು ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ. ಎಕ್ಸಿಮಾ ಅಥವಾ ತುರಿಕೆಯ ಚರ್ಮದ ಕಾಯಿಲೆಗೂ
ಲೋಳೆಸರವನ್ನು ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ. ಲೋಳೆಸರದಲ್ಲಿ ಪಾಲಿಸ್ಯಾಖರೈಡ್ ಎಂಬ ಪೋಷಕಾಂಶವಿದೆ. ಇದು
ತ್ವಚೆಯಲ್ಲಿ ಆರ್ದ್ರತೆ ಉಳಿಸಿಕೊಳ್ಳಲು ನೆರವಾಗುತ್ತದೆ ಹಾಗೂ ಕೊಲ್ಯಾಜೆನ್ ಹಾಗೂ ಎಲಾಸ್ಟಿನ್ ಎಂಬ ಅಂಶಗಳ
ಉತ್ಪಾದನೆಯನ್ನು ಹೆಚ್ಚಿಸಿ ತ್ವಚೆ ಆರೋಗ್ಯಕರ, ಸೌಮ್ಯ ಹಾಗೂ ಕಾಂತಿಯುಕ್ತವಾಗಿರಲು ನೆರವಾಗುತ್ತದೆ.

 ಸ್ನಾನಕ್ಕೂ ಮುನ್ನ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಮೈಗೆಲ್ಲಾ ಹಚ್ಚಿಕೊಳ್ಳುವ ಮೂಲಕ ಒಣಚರ್ಮದವರಿಗೆ
ಹೆಚ್ಚಿನ ಆರೈಕೆ ದೊರಕುತ್ತದೆ. ಕೊಬ್ಬರಿ ಎಣ್ಣೆಯ ತ್ವಚೆಯ ಆಳಕ್ಕಿಳಿದು ಪೋಷಣೆ ನೀಡುವ ಗುಣ ಹೊಂದಿದೆ ಹಾಗೂ ಸ್ನಾನದ
ಸಮಯದಲ್ಲಿ ಸೂಕ್ಷ್ಮರಂಧ್ರಗಳಿಂದ ಆರ್ದ್ರತೆ ನಷ್ಟವಾಗದಂತೆ ತಡೆಯುತ್ತದೆ. ಆದರೆ ಕೊಬ್ಬರಿ ಎಣ್ಣೆಯನ್ನು ಪ್ರತಿ ಬಾರಿಯ
ಸ್ನಾನಕ್ಕೂ ಮುಂಚೆ ಹಚ್ಚಿಕೊಳ್ಳಬೇಕಾಗಿಲ್ಲ. ದಿನದ ಯಾವುದೇ ಹೊತ್ತಿನಲ್ಲಿ ಹಚ್ಚಿಕೊಳ್ಳಬಹುದು. ಕೊಬ್ಬರಿ ಎಣ್ಣೆ ಅಗ್ಗವೂ
ಹಾಗೂ ಅತ್ಯಂತ ಉತ್ತಮವಾದ ತೇವಕಾರಕವೂ ಆಗಿರುವ ಕಾರಣ ಇದನ್ನು ಬಳಸದಿರಲು ಕಾರಣ ಉಳಿಯುವುದಿಲ್ಲ. ಕೊಬ್ಬರಿ
ಎಣ್ಣೆಯ ನೈಸರ್ಗಿಕ ಪರಿಮಳದೊಂದಿಗೆ ನಿಮ್ಮ ಇಷ್ಟದ ಲ್ಯಾವೆಂಡರ್ ಅಥವಾ ಇತರ ಅವಶ್ಯಕ ತೈಲದ ಹನಿಗಳನ್ನು
ಬೆರೆಸಿಕೊಳ್ಳುವ ಮೂಲಕ ನಿಮ್ಮ ಸ್ನಾನವನ್ನು ಇನ್ನಷ್ಟು ತೇಜೋಹಾರಿಯಾಗಿಸಬಹುದು.

ನೈಸರ್ಗಿಕ ರೂಪದ ಗ್ಲಿಸರಿನ್ ಯಾವುದೇ ಪ್ರಸಾದನದೊಂದಿಗೆ ಮಿಶ್ರಣಗೊಳ್ಳದೇ ಇದ್ದಾಗ ಒಣಚರ್ಮಕ್ಕೆ ಅತ್ಯುತ್ತಮವಾದ
ಮೃದುಕಾರಿ ಆರೈಕೆ ನೀಡಬಲ್ಲುದು. ಕೊಂಚ ಗುಲಾಬಿ ನೀರಿನಲ್ಲಿ ಕೊಂಚ ಪ್ರಮಾಣದ ಗ್ಲಿಸರಿನ್ ಬೆರೆಸಿ ತೆಳುವಾಗಿ
ಹಚ್ಚಿಕೊಳ್ಳಬೇಕು. ಈಗಾಗಲೇ ಬಿರುಕುಬಿಟ್ಟಿರುವ ಸ್ಥಳಗಳಲ್ಲಿ ಕೊಂಚ ದಪ್ಪನಾಗಿ ಹಚ್ಚಿಕೊಳ್ಳಬೇಕು. ಸುಮಾರು ಒಂದು
ಘಂಟೆಯ ಕಾಲ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಬೇಕು. ಈ ವಿಧಾನವನ್ನು ಸ್ನಾನಕ್ಕೂ
ಮುನ್ನವೇ ಅನುಸರಿಸುವುದನ್ನು ನಾವು ಸಲಹೆ ಮಾಡುತ್ತೇವೆ. ಏಕೆಂದರೆ ಕೆಲವು ವ್ಯಕ್ತಿಗಳಿಗೆ ಗ್ಲಿಸರಿನ್ ಕೊಂಚ ಅಂಟು ಅಂಟಾದ
ಅನುಭವವುಂಟುಮಾಡಬಹುದು. ವಿಶೇಷವಾಗಿ ಹೊರಹೋಗಬೇಕಾದ ಸಂದರ್ಭ ಎದುರಾದರೆ ಮುಜುಗರಕ್ಕೂ
ಕಾರಣವಾಗಬಹುದು.

ಜೊಜೋಬಾ ಎಣ್ಣೆಯನ್ನು ಸಾಮಾನ್ಯದಿಂದ ಒಣಚರ್ಮದವರು ಬಳಸಬಹುದು. ಮುಖಕ್ಕೂ ಈ ಎಣ್ಣೆಯನ್ನು ಸುರಕ್ಷಿತವಾಗಿ
ಬಳಸಬಹುದು. ನಮ್ಮ ತ್ವಚೆಯಲ್ಲಿರುವ ನೈಸರ್ಗಿಕ ಎಣ್ಣೆಯ ಜಿಡ್ಡನ್ನೇ ಹೋಲುವ ಈ ಎಣ್ಣೆ ತ್ವಚೆಗೆ ನೈಸರ್ಗಿಕ ಆರೈಕೆಯನ್ನು
ಒದಗಿಸುತ್ತದೆ.

ವ್ಯಾಸೆಲಿನ್ ಎಂದೇ ಹೆಚ್ಚು ಪ್ರಖ್ಯಾತವಾಗಿರುವ ಪೆಟ್ರೋಲಿಯಂ ಜೆಲ್ಲಿ ಒಣಚರ್ಮಕ್ಕೆ ಅತ್ಯುತ್ತಮ ಆರೈಕೆ ನೀಡುವ
ಪ್ರಸಾದನವಾಗಿದೆ. ಒಣಚರ್ಮದಿಂದ ಬಿರುಕು ಬಿಟ್ಟು ನೋವು ಎದುರಾಗಿದ್ದರೆ ಕೊಂಚ ಪೆಟ್ರೋಲಿಯಂ ಜೆಲ್ಲಿಯನ್ನು ತೆಳುವಾಗಿ
ರಾತ್ರಿ ಮಲಗುವ ಮುನ್ನ ಹಚ್ಚಿಕೊಳ್ಳಿ ಹಾಗೂ ರಾತ್ರಿಯಿಡೀ ಹಾಗೇ ಬಿಡಿ. ಬೆಳಿಗ್ಗೆದ್ದಾಗ ಯಾವ ಜಾದೂವಿನ ಪ್ರಭಾವವೋ
ಎಂಬಂತೆ ಒಣಚರ್ಮ ಇಲ್ಲವಾಗಿರುತ್ತದೆ. ಈ ಜೆಲ್ಲಿಯನ್ನು ತುಟಿಗಳಿಗೂ ಪಾದಗಳ ಹಿಮ್ಮಡಿಗಳಿಗೂ ಬಳಸಬಹುದು. ಇದಕ್ಕಾಗಿ
ಹಿಮ್ಮಡಿಗಳಿಗೆ ದಪ್ಪನಾಗಿ ಪೆಟ್ರೋಲಿಯಂ ಜೆಲ್ಲಿ ಹಚ್ಚಿಕೊಂಡು ದಪ್ಪನೆಯ ಉಣ್ಣೆಯ ಅಥವಾ ಹತ್ತಿಯ ಕಾಲುಚೀಲ ಧರಿಸಿ
ಮಲಗಿಕೊಳ್ಳಿ. ಮರುದಿನ ಬೆಳಿಗ್ಗೆದ್ದಾಗ ಹಿಮ್ಮಡಿ ಬಿರುಕುಗಳೂ ಸಾಕಷ್ಟು ತುಂಬಿರುವುದನ್ನು ಗಮನಿಸಬಹುದು.

ಸತ್ತ ಜೀವಕೋಶಗಳನ್ನು ನಿವಾರಿಸುವ ವಿಧಾನವಾದ ಎಕ್ಸ್ ಫೋಲಿಯೇಶನ್ ಕೇವಲ ಮುಖದ ತ್ವಚೆಗೆ ಮಾತ್ರವಲ್ಲ, ದೇಹದ
ಇತರ ಭಾಗದ ತ್ವಚೆಗೂ ಅಗತ್ಯವಿದೆ. ನಮ್ಮ ಚರ್ಮದ ಹೊರಪದರದ ಜೀವಕೋಶಗಳು ಸತತವಾಗಿ ಸಾಯುತ್ತಾ ಹೊಸ
ಜೀವಕೋಶಗಳಿಗೆ ದಾರಿ ಮಾಡಿಕೊಡುತ್ತವೆ. ಆದರೆ ಸತ್ತ ಜೀವಕೋಶಗಳು ಹೊರಪದರದಿಂದ ಅಷ್ಟು ಸುಲಭವಾಗಿ
ಹೋಗುವುದಿಲ್ಲ. ಇವನ್ನು ನಿವಾರಿಸಲು ಹರಳಿನಾಕಾರದ ಸಾಮಾಗ್ರಿಗಳನ್ನು ಬಳಸಬೇಕಾಗುತ್ತದೆ. ಉದಾಹರಣೆಗೆ ಸಕ್ಕರೆ,
ಕಲ್ಲುಪ್ಪು, ಕಾಫಿ ಪುಡಿ, ಓಟ್ಸ್ ಪುಡಿ ಇತ್ಯಾದಿಗಳನ್ನು ನಿಮ್ಮ ನೆಚ್ಚಿನ ತೈಲದೊಂದಿಗೆ ಬೆರೆಸಿ ಹಚ್ಚಿಕೊಂಡು ನಯವಾಗಿ
ಉಜ್ಜಿಕೊಳ್ಳುವ ಮೂಲಕ ಇವುಗಳನ್ನು ನಿವಾರಿಸಬಹುದು. ಇದರಿಂದ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ ಹಾಗೂ
ತ್ವಚೆಯ ಬಿರುಕುಗಳ ಕಲೆಗಳೂ ನಿವಾರಣೆಯಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ