ತಲೆ ಹೊಟ್ಟಿಗೆ ಮನೆ ಮದ್ದು.

  • by

ತಲೆಯ ಹೊಟ್ಟು ಕೂದಲಿನ ದೃಢತೆಯನ್ನು ಕಡಿಮೆ ಮಾಡಿ ಕೂದಲು ತುಂಡಾಗುವಂತೆ ಮಾಡುತ್ತದೆ. ಈ ಸಮಸ್ಯೆಯನ್ನು ಗಂಭೀರವಾಗಿ
ಪರಿಗಣಿಸಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆ್ಯಂಟಿ ಡ್ಯಾಂಡ್ರಫ್ ಶ್ಯಾಂಪೂವಿನಿಂದ ಒಮ್ಮೆಗೆ ತಲೆಹೊಟ್ಟು
ನಿವಾರಣೆಯಾಗುತ್ತದೆ ಆದರೆ 3,4 ದಿನಗಳಲ್ಲಿ ಮತ್ತೆ ಹೊಟ್ಟು ಕಂಡುಬರುತ್ತದೆ. ಅತಿಯಾದ ರಾಸಾಯನಿಕ ಕೂಡ ತಲೆಬುರುಡೆಯನ್ನು
ಶುಷ್ಕಗೊಳಿಸಿ ಹೆಚ್ಚಿನ ಕೂದಲು ಉದುರಲು ಕಾರಣವಾಗುತ್ತದೆ. ನೈಸರ್ಗಿಕ ವಿಧಾನವನ್ನು ಅನುಸರಿಸಿ ತಲೆಹೊಟ್ಟಿಗೆ ಗುಡ್‌ಬೈ
ಹೇಳಬಹುದು.

ಅದಕ್ಕಾಗಿ ಸಿದ್ದ ರೂಪದ ಶಾಂಪೂವನ್ನು ನೀವೇ ನಿಮ್ಮ ಮನೆಯಲ್ಲಿಯೇ ತಯಾರಿಸಿಕೊಳ್ಳುವುದೇ ಉತ್ತಮ. ಇದಕ್ಕೆ ಬೇಕಾಗಿರುವ
ಸಾಮಾಗ್ರಿಗಳು ಸಹಾ ನಿಮ್ಮ ಅಡುಗೆ ಮನೆಯಲ್ಲಿಯೇ ಇವೆ. ವರ್ಷಗಳಿಂದ ತಲೆಹೊಟ್ಟನ್ನು ಸಮರ್ಥವಾಗಿ ನಿವಾರಿಸುತ್ತಾ ಬಂದಿರುವ
ನೆಲ್ಲಿಕಾಯಿ ಪುಡಿ, ಅಂಟುವಾಳ ಪುಡಿ, ಸೀಗೆಪುಡಿ ಮೊದಲಾದವೇ ಈ ಸಾಮಾಗ್ರಿಗಳು. ಇವುಗಳಲ್ಲಿರುವ ಶಿಲೀಂಧ್ರ ನಿವಾರಕ ಗುಣ
ತಲೆಹೊಟ್ಟಿಗೆ ಕಾರಣವಾಗಿರುವ ಶಿಲೀಂಧ್ರವನ್ನು ನಿವಾರಿಸಿ ಇದರಲ್ಲಿ ಆಶ್ರಯಪಡೆದಿದ್ದ ಬ್ಯಾಕ್ಟೀರಿಯಾಗಳನ್ನೂ ನಿವಾರಿಸಿ
ತಲೆಹೊಟ್ಟನ್ನು ಮೂಲದಿಂದಲೇ ಇಲ್ಲವಾಗಿಸುತ್ತದೆ. ತಲೆಯ ಚರ್ಮಕ್ಕೆ ಸೂಕ್ತ ಆರೈಕೆ ನೀಡುವ ಮೂಲಕ ಚರ್ಮದ ಹೊರಪದರ
ಒಣಗಿ ಪಕಳೆಯಂತೆ ಏಳುವ ಹಾಗೂ ತಲೆಹೊಟ್ಟಾಗುವುದನ್ನು ತಡೆಯುತ್ತದೆ. ತಲೆಯ ಹೊಟ್ಟಿಗೆ ಮುಖ್ಯ ಕಾರಣ ತಲೆಯ ಸ್ವಚ್ಛತೆ
ಮಾಡದೇ ಇರುವುದು, ಶಿಲೀಂಧ್ರ ಸೋಂಕು, ತಲೆಯ ಚರ್ಮದಲ್ಲಿ ಜಿಡ್ಡಿನ ಅಂಶ, ಕಡಿಮೆ ಗುಣಮಟ್ಟದ ಕೂದಲ ಉತ್ಪನ್ನಗಳ ಬಳಕೆ,
ಅನುವಂಶಿಕ ಕಾರಣಗಳು.

ಬಾಳೆಹಣ್ಣಿನ ಮಾಸ್ಕ್
ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಹಿಸುಕಿ ಒಂದು ಚಮಚ ಮೊಸರು ನಾಲ್ಕು ಚಮಚ ಬಾದಾಮಿ ಎಣ್ಣೆ ಮಿಶ್ರ
ಮಾಡಿ ಈ ಮಿಶ್ರಣವನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ. 20 ನಿಮಿಷ ಬಿಟ್ಟು ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ.

ದಾಸವಾಳದ ಎಣ್ಣೆ
ತಲೆಹೊಟ್ಟು ಹೆಚ್ಚಾಗಿದ್ದು ಸತತವಾಗಿ ತಲೆ ತುರಿಕೆಯಾಗುತ್ತಿದೆಯೇ? ಇದಕ್ಕೆ ದಾಸವಾಳದ ಎಣ್ಣೆ ಉತ್ತಮ ಪರಿಹಾರವಾಗಿದೆ.
ನಿಯಮಿತವಾಗಿ ದಾಸವಾಳದ ಎಣ್ಣೆಯನ್ನು ತಲೆಗೆ ಹಚ್ಚುತ್ತ ಬರುವ ಮೂಲಕ ಶೀಘ್ರವೇ ತಲೆಹೊಟ್ಟು ಇಲ್ಲವಾಗಿ ತುರಿಕೆಯೂ
ಇಲ್ಲವಾಗುತ್ತದೆ. ಮಾರುಕಟ್ಟೆಯಲ್ಲಿ ಈ ಎಣ್ಣೆ ಸಿಗದೇ ಇದ್ದರೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಕೊಂಚ
ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದರಲ್ಲಿ ಪೂರ್ಣ ಮುಳುಗುವಂತೆ ಕೆಲವು ದಾಸವಾಳದ ಹೂವಿನ ದಳಗಳನ್ನು ಜಜ್ಜಿ ಇದರೊಂದಿಗೆ
ಕೆಲವು ನೆಲ್ಲಿಕಾಯಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಚಿಕ್ಕ ಉರಿಯಲ್ಲಿ ಕುದಿಯಲು ಬಿಡಿ. ಸುಮಾರಾಗಿ ಎಲ್ಲಾ ಹೂವಿನ ದಳಗಳು
ಕರಗಿವೆ ಅನ್ನಿಸಿದ ಬಳಿಕ ಇಳಿಸಿ ಹಾಗೇ ತಣಿಯಲು ಬಿಡಿ. ಬಳಿಕ ಇದನ್ನು ಬಟ್ಟೆಯಲ್ಲಿ ಹಾಕಿ ಹಿಂಡಿ ಸೋಸಿ ಬಳಸಿ.

ಈರುಳ್ಳಿ ರಸ ಮತ್ತು ಬೇವಿನ ರಸ
ಒಂದು ಚಮಚ ಈರುಳ್ಳಿ ರಸ ಮತ್ತು ಎರಡು ಚಮಚ ಬೇವಿನ ರಸಕ್ಕೆ 2-3 ರೋಸ್ ವಾಟರ್ ಮಿಶ್ರ ಮಾಡಿ. ಇದನ್ನು ಕೂದಲಿನ
ಬುಡಕ್ಕೆ ಹಚ್ಚಿ. 15 ನಿಮಿಷ ಹಾಗೆಯೇ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಕೂದಲು ತೊಳೆದುಕೊಳ್ಳಿ.

ನಿಂಬೆರಸ ತೆಂಗಿನೆಣ್ಣೆ

ತೆಂಗಿನ ಎಣ್ಣೆ ಕೂದಲಿಗೆ ಮಾಯಿಶ್ಚರೈಸ್ ನೀಡುತ್ತದೆ ನಿಂಬೆರಸ ನೈಸರ್ಗಿಕವಾಗಿ ತಲೆಹೊಟ್ಟು ನಿವಾರಣೆ ಮಾಡುವುದು. ತೆಂಗಿನ ಎಣ್ಣೆ
ಬಿಸಿ ಮಾಡಿ ಇದಕ್ಕೆ ಕೆಲವು ಹನಿ ನಿಂಬೆರಸ ಸೇರಿಸಿ ಬೆರಳಿನ ಸಹಾಯದಿಂದ ತಲೆಬುಡಕ್ಕೆ ಮಸಾಜ್ ಮಾಡಿಕೊಳ್ಳಿ.

ಲೋಳೆಸರ ಮತ್ತು ಮೆಂತೆ
ಸುಮಾರು ಒಂದು ಚಮಚ ಮೆಂತೆಕಾಳುಗಳನ್ನು ನೆನೆಸಿಡಿ. ಬೆಳಗ್ಗೆ ನೆನೆದ ಕಾಳುಗಳನ್ನು ನುಣ್ಣಗೆ ಅರೆದು ಮಿಶ್ರಣ ತಯಾರಿಸಿ. ಇದಕ್ಕೆ
ಲೋಳೆಸರದ ಚಿಕ್ಕ ಕೋಡು ಸೇರಿಸಿ ಮತ್ತೊಮ್ಮೆ ಅರೆದುಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿ 20 ನಿಮಿಷ ಬಿಡಿ.

ಲೋಳೆಸರ ಮತ್ತು ಲಿಂಬೆರಸ
ಅರ್ಧಲಿಂಬೆ ಹಣ್ಣಿನ ರಸಕ್ಕೆ ಚಿಕ್ಕ ಕೋಡು ಲೋಳೆಸರ ಸೇರಿಸಿ ಮೇಲೆ ಹೇಳಿದಂತೆಯೇ ಇದನ್ನು ಹಚ್ಚಿ 20 ನಿಮಿಷ ಬಿಡಿ. ಮೃದು
ಶ್ಯಾಂಪೂ ಬಳಸಿ ಕೂದಲು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ.

ಹರಳೆಣ್ಣೆ
ಅಲೊವೇರಾ ಅರೆದು ಅರ್ಧಕಪ್‌ನಷ್ಟು ಮಾಡಿಕೊಳ್ಳಿ. ಇದಕ್ಕೆ ಎರಡು ಚಮಚ ಹರಳೆಣ್ಣೆ ಸೇರಿಸಿ. ಇದನ್ನು ಮಿಶ್ರ ಮಾಡಿ ತಲೆಗೆ ಹಚ್ಚಿ.
ಪ್ಲಾಸ್ಟಿಕ್ ಟೊಪ್ಪಿ ತಲೆಗೆ ಹಾಕಿಕೊಳ್ಳಿ ಮರುದಿನ ಬೆಳಗ್ಗೆ ತಣ್ಣೀರಿನಿಂದ ಕೂದಲು ತೊಳೆದುಕೊಂಡು ಮೃದು ಶ್ಯಾಂಪೂ ಬಳಸಿ.
ವಾರದಲ್ಲಿ ಒಂದು ಬಾರಿ ಈ ವಿಧಾನ ಅನುಸರಿಸಿ.

ಮೊಟ್ಟೆಯ ಬಳಕೆ
ಎರಡು ಮೊಟ್ಟೆ ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಕೂದಲಿಗೆ ಹಚ್ಚಿ. ಒಂದು ಗಂಟೆ ತರುವಾಯ ಕೂದಲಿಗೆ
ಶ್ಯಾಂಪೂ ಮಾಡಿಕೊಳ್ಳಿ.

ತುಳಸಿ
ತುಳಸಿ ಮತ್ತು ನೆಲ್ಲಿ ಕಾಯಿಯ ಪುಡಿಯನ್ನು ನೀರಿನಲ್ಲಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ.
ಅರ್ಧ ಗಂಟೆಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ನಿಮ್ಮ ಕೂದಲನ್ನು ನೀರು ಮತ್ತು ಶ್ಯಾಂಪೂವನ್ನು ಬಳಸಿ ಚೆನ್ನಾಗಿ ತೊಳೆಯಿರಿ.

ಬೆಳ್ಳುಳ್ಳಿ
ಎರಡು ಚಮಚದಷ್ಟು ಬೆಳ್ಳುಳ್ಳಿಯ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆರಸವನ್ನು ಬೆರೆಸಿ ತೆಳುವಾದ ಪೇಸ್ಟ್
ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ, 30 ರಿಂದ 40 ನಿಮಿಷಗಳಷ್ಟು ಕಾಲ ಬಿಡಿ. ನಂತರ ಇದನ್ನು ಶಾಂಪೂ
ಮತ್ತು ತಣ್ಣೀರನ್ನು ಬಳಸಿ, ಚೆನ್ನಾಗಿ ತೊಳೆಯಿರಿ.
ಆಲೀವ್ ಎಣ್ಣೆ

ಒ೦ದು ಚಮಚದಷ್ಟು ಅಲೀವ್ ಎಣ್ಣೆಯೊ೦ದಿಗೆ ಮೂರು ಟೀ ಚಮಚದಷ್ಟು ಈರುಳ್ಳಿ ರಸವನ್ನು ಬೆರೆಸಿರಿ. ಈ ಮಿಶ್ರಣವನ್ನು ನಿಮ್ಮ
ತೆಲೆಗೆ ಹಾಗೂ ಕೂದಲಿಗೆ ಹಚ್ಚಿರಿ. ನೀವೊ೦ದು ಬೆಚ್ಚನೆಯ ಟವಲ್ ಅನ್ನೂ ಸಹ ಅರ್ಧ ಗಂಟೆಯ ಕಾಲ ನಿಮ್ಮ ತಲೆಗೆ
ಸುತ್ತಿಕೊಳ್ಳಬಹುದು. ನ೦ತರ ಮ೦ದವಾದ ಶಾ೦ಪೂವನ್ನು ಬಳಸಿ ತಲೆಯನ್ನು ತೊಳೆದುಕೊಳ್ಳುವುದರ ಮೂಲಕ ತಲೆಹೊಟ್ಟನ್ನು
ಪರಿಣಾಮಕಾರಿಯಾಗಿ ನಿವಾರಿಸಬಹುದು.

ಕೊಬ್ಬರಿ ಮತ್ತು ಲಿಂಬೆ ರಸ
ಒ೦ದು ಚಮಚದಷ್ಟು ಲಿ೦ಬೆರಸ, ಐದು ಚಮಚಗಳಷ್ಟು ಕೊಬ್ಬರಿ ಎಣ್ಣೆಯನ್ನು ಮಿಶ್ರಗೊಳಿಸಿರಿ. ಈಗ, ಈ ಮಿಶ್ರಣವನ್ನು ತಲೆಗೆ
ಹಿಚ್ಚಿಕೊ೦ಡು 20 ರಿ೦ದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ, ನ೦ತರ ತಲೆಯನ್ನು ಚೆನ್ನಾಗಿ ತೊಳೆಯಿರಿ. ಇದು ತಲೆಹೊಟ್ಟು
ನಿವಾರಿಸುವಲ್ಲಿ ಪರಿಣಾಮಕಾರಿ ಮನೆಮದ್ದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ