ಗುರು ಹಿರಿಯರ ಆಶೀರ್ವಾದವೇ ಶ್ರೀರಕ್ಷೆ – ಡಾ.ಡಿ ವೀರೇಂದ್ರ ಹೆಗ್ಗಡೆ

  • by

ಒಳ್ಳೆಯ ಜೀವನ ನಡೆಸುವುದಕ್ಕೆ ಗುರು ಹಿರಿಯರ ಮಾರ್ಗದರ್ಶನ ಹಾಗೂ ಆಶೀರ್ವಾದ ಬೇಕಾಗುತ್ತದೆ. ಗುರುಗಳಿಗೆ ಗುರುಪೀಠಕ್ಕೆ ಯಾಕೆ ಶರಣಾಗಬೇಕೆಂದರೆ, ನಾವು ತಪ್ಪು ಮಾಡಿದಾಗ ಗುರುಗಳು ನಿರ್ದಾಕ್ಷಿಣ್ಯವಾಗಿ , ನಿರ್ವ್ಯಾಜದಿಂದ ಅದನ್ನು ತೋರಿಸಿ ತಿದ್ದುತ್ತಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಧರ್ಮಸ್ಥಳದ ಧರ್ಮಾಧಿರಿಗಳು ಹೇಳೋದೇನು..?

ಧರ್ಮಮಾರ್ಗದಿಂದ ಜೀವನ ನಡೆಸಬೇಕು.. ಎಲ್ಲರೂ ಸ್ವರ್ಗಕ್ಕೆ ಹೋಗಬೇಕೆಂದು ಬಯಸುತ್ತಾರೆ. ಸತ್ತ ನಂತರ ಸ್ವರ್ಗಕ್ಕೋ ನರಕ್ಕಕ್ಕೋ ಎಂಬುದಕ್ಕಿಂತ ಬದುಕಿರುವಾಗಲೇ ಸ್ವರ್ಗವನ್ನು ನೋಡಬೇಕಾದರೆ ಧರ್ಮಮಾರ್ಗದಿಂದ ಜೀವನ ನಡೆಸಬೇಕು. ಎಲ್ಲರೂ ಸಂತೋಷದಿಂದ ಬದುಕುವಂತೆ ಸಮಾಜಕ್ಕೆ ಉಪಕಾರವಾದ ವ್ಯವಹಾರ ನಡೆಸಬೇಕು. ಯಾಕಂದರೆ, ಅವರಿಗೆ ಎಲ್ಲರ ಹಿತ, ಧರ್ಮದ ಹಿತ ಆದ್ಯತೆಯಾಗಿರುತ್ತದೆ. ಹಾಗಾಗಿ ನಮ್ಮ ಸಮಾಜದ ಒಳಿತಿಗಾಗಿ ವಿಶಾಲ ದೃಷ್ಟಿಯುಳ್ಳ ಸಾಧು ಸಂತರ , ಹಿರಿಯರ ಸಂಗವನ್ನು ಮಾಡಿ, ಸಾಧು ಸಂತರು ನಮ್ಮಲ್ಲಿರುವ ದುಷ್ಟ ಸ್ವಭಾವಗಳನ್ನು ದೂರ ಮಾಡಿ, ಸತ್ಸ್ವಭಾವಗಳನ್ನು ಅಳವಡಿಸಿಕೊಳ್ಳುವುದಕ್ಕೆ ದಾರಿ ತೋರುತ್ತಾರೆ.

ನಾವಿವತ್ತು ಒಳ್ಳೆಯ ಸುಭಿಕ್ಷೆಯ ಕಾಲದಲ್ಲಿದ್ದೇವೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೆ ಸರ್ಕಾರ ಸಹಾಯ ಮಾಡುತ್ತದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಉಚಿತವಾಗಿ ದೊರೆಯುತ್ತದೆ. ಮೊದಲು ಒಂದು ತಾಲೂಕಿಗೆ ಒಂದು ಶಾಲೆಯೂ ಇರಲಿಲ್ಲ. ಇಂದು ಪ್ರತಿ ಪಂಚಾಯ್ತಿ ಹಂತದಲ್ಲಿ ಒಂದೊದು ಶಾಲೆಗಳಿವೆ. ಎಲ್ಲಾ ವ್ಯವಸ್ಥೆಗಳು ನಮ್ಮ ಒಳಿತಿಗಾಗಿ ರೂಪಿಸಲ್ಪಟ್ಟರೂ, ಅದು ಅರ್ಥಪೂರ್ಣವಾಗಬೇಕಾದರೆ ಮಾನವ ಜೀವನ ಮೂಲಭೂತವಾದ ಧರ್ಮವನ್ನು ಮರೆಯಬಾರದು.

ತೃಪ್ತಿ ಹಾಗೂ ಸಂತೃಪ್ತಿ ಎಂಬ ಎರಡೂ ಪದಗಳಿವೆ. ನಮಗೆ ಎಷ್ಟು ಸಂಪತ್ತು ಇದ್ದರೂ ತೃಪ್ತಿಯಾಗುವುದಿಲ್ಲ. ಇನ್ನಷ್ಟು ಬೇಕು ಮತ್ತಷ್ಟು ಬೇಕು ಎಂಬ ಹಂಬಲ ಹೆಚ್ಚಾಗಿರುತ್ತದೆ. ಬೇರೆ ಯಾವುದರಿಂದಲೂ ಮನುಷ್ಯನನ್ನು ತೃಪ್ತಿ ಗೊಳಿಸಲಾಗದಿದ್ದರೂ ತಾತ್ಕಲಿಕವಾಗಿ ದಾಸೋಹದಿಂದ ಒಮ್ಮೆ ಆತನನ್ನು ತೃಪ್ತಿಗೊಳಿಸಬಹುದು. ಆದ್ದರಿಂದ ಎಲ್ಲಾ ಧಾರ್ಮಿಕ ಕ್ಷೇತ್ರದಲ್ಲಿ ದಾಸೋಹವನ್ನು ನಡೆಸುತ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ದಿನ ಸಾವಿರಾರು ಭಕ್ತರು ಅನ್ನಪೂರ್ಣದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ಬೇರೆ ಬೇರೆ ಕ್ಷೇತ್ರಗಳಲ್ಲೂ ದಾಸೋಹ ನಡೆಯುತ್ತದೆ. ಬೇರೆ ದಾನದಿಂದ ಮನುಷ್ಯನನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಹಣ ಕೊಟ್ಟರೆ, ಇನ್ನೊಂದಿಷ್ಟು ಕೊಡುವ ಸಾಮರ್ಥ ಅವರಿಗಿತ್ತು, ಕೊಡಬಹುದಿತ್ತು ಎನ್ನುತ್ತಾರೆ. ಹೀಗೆ ಹಣ ಕೊಟ್ಟರೂ ಮನುಷ್ಯ ತೃಪ್ತಿ ಹೊಂದುವುದಿಲ್ಲ. ಯಾಕಂದ್ರೆ ಆತನಲ್ಲಿ ಇನ್ನಷ್ಟು ಬೇಕೆಂಬ ಹಂಬಲ ಜಾಗೃತವಾಗಿಯೇ ಇರುತ್ತದೆ. ಆದರೆ ಒಮ್ಮೆ ಊಟ ಹಾಕಿದರೆ ಬೇಕಷ್ಟು ಸ್ವೀಕರಿಸುತ್ತಾರೆ. ಹೊಟ್ಟೆ ತುಂಬಿದ ತಕ್ಷಣ ಸಾಕು ಎಂಬ ಭಾವ ಉಂಟಾಗುತ್ತದೆ. ಅದಕ್ಕಾಗಿಯೇ ಪೂರ್ವಜರು ದಾಸೋಹಕ್ಕೆ ವಿಶೇಷ ಮಹತ್ವ ನೀಡಿದ್ದರು. ಸಂಪತ್ತಿನಿಂದ ಯಾರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂಬ ಉದಾಹರಣೆಯನ್ನು ಅನೇಕ ಪುರಾಣಗಳು ತಿಳಿಸುತ್ತವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ